ದೇವರಿಗೆ ಅರ್ಪಿಸುವ `ಹಣ್ಣು-ಕಾಯಿ’ಯಲ್ಲಿ ತೆಂಗಿನಕಾಯಿ, ಬಾಳೆಹಣ್ಣು ಮಾತ್ರ ಯಾಕೆ ಇರುತ್ತದೆ?
ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ `ಹಣ್ಣು ಕಾಯಿ’ ಮಾಡಿಸುವ ಪದ್ಧತಿ ಇದೆ. ಅಂದರೆ ದೇವಸ್ಥಾನಕ್ಕೆ ಹೋಗುವಾಗ ತೆಂಗಿನಕಾಯಿ, ಬಾಳೆಹಣ್ಣು, ಹೂವನ್ನು ನಾವು ತೆಗೆದುಕೊಂಡು ಹೋಗುತ್ತೇವೆ. ದೇವರಿಗೆ ಹಣ್ಣುಕಾಯಿ ಮಾಡಿಸುವುದು ಶ್ರೇಷ್ಠ ಎಂಬ ನಂಬಿಕೆ ನಮ್ಮಲ್ಲಿ ಅನಾದಿ ಕಾಲದಿಂದಲೂ ಇದೆ. ಆದರೆ ಲೋಕದಲ್ಲಿ ಇಷ್ಟೆಲ್ಲಾ ಹಣ್ಣುಗಳು ಇದ್ದರೂ `ಹಣ್ಣು ಕಾಯಿಯಲ್ಲಿ’ ತೆಂಗಿನಕಾಯಿ ಮತ್ತು ಬಾಳೆಹಣ್ಣು ಮಾತ್ರ ಯಾಕೆ ಮುಖ್ಯವಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಇಲ್ಲಿದೆ ಉತ್ತರ.
ಶುದ್ಧತೆ
ಬಾಳೆಹಣ್ಣುಗಳು ಮತ್ತು ತೆಂಗಿನಕಾಯಿಗಳು ಅವುಗಳ ಶುದ್ಧತೆಯ ಕಾರಣದಿಂದ ಗಮನ ಸೆಳೆಯುತ್ತವೆ. ಇದೇ ಕಾರಣಕ್ಕೆ ಇವುಗಳನ್ನು ದೇವರಿಗೆ ಪ್ರಥಮವಾಗಿ ಅರ್ಪಿಸಲಾಗುತ್ತದೆ. ಯಾಕೆಂದರೆ ಬಾಳೆಗಿಡ ಹಾಗೂ ತೆಂಗಿನ ಗಿಡ ನಾವು ತಿಂದು ಎಸೆದ ಬೀಜಗಳಿಂದ ಉತ್ಪತ್ತಿಯಾಗುವುದಿಲ್ಲ. ಇತರ ಬಹುತೇಕ ಗಿಡಗಳು ನಾವು ತಿಂದು ಎಸೆದ ಬೀಜಗಳಿಂದ ಅಥವಾ ಪಕ್ಷಿ, ಮೃಗಗಳ ಮೂಲಕ ಒಂದು ಕಡೆಯಿಂದ ಮತ್ತೊಂದೆಡೆ ಸೇರಿ ಬಿದ್ದು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ. ಆದರೆ ತೆಂಗಿನ ಮರ ಹಾಗೂ ಬಾಳೆಗಿಡ ಹಾಗೆ ಬೆಳೆಯದು. ಹೀಗಾಗಿ ಇವೆರಡು ಶುದ್ಧತೆಯ ಸಂಕೇತಗಳಾಗಿವೆ.
ಕಲ್ಪವೃಕ್ಷ
ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಕಲ್ಪವೃಕ್ಷ ಎಂದರೆ ಇಷ್ಟಾರ್ಥಗಳನ್ನು ಕರುಣಿಸುವ ಮರ. ತೆಂಗಿನ ಮರದ ಎಲ್ಲಾ ವಸ್ತುಗಳೂ ಮನುಷ್ಯನ ಬಳಕೆಗೆ ಯೋಗ್ಯವಾಗಿದೆ. ಹಾಗೆಯೇ ಹಿಂದೂ ಪುರಾಣಗಳಲ್ಲಿ ಬಾಳೆ ಗಿಡವನ್ನು ಕೂಡಾ ಕಲ್ಪವೃಕ್ಷಕ್ಕೆ ಸಮಾನವಾಗಿಯೇ ಪರಿಗಣಿಸಲಾಗುತ್ತದೆ. ಇದರ ಎಲೆ, ಕಾಂಡ, ಹೂವು, ಹಣ್ಣು ಎಲ್ಲವನ್ನೂ ಬಳಸಬಹುದಾಗಿದೆ. ಜೊತೆಗೆ ಹಿಂದೂ ಸಂಪ್ರದಾಯದಲ್ಲಿ ಬಾಳೆ ಗಿಡವನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಮದುವೆ, ಪೂಜೆ ಅಥವಾ ಇತರ ಶುಭಕಾರ್ಯಗಳಲ್ಲಿ ಬಾಳೆಗಿಡ ಬೇಕೇಬೇಕು. ಜೊತೆಗೆ ಬಾಳೆ ಎಲೆ ಕೂಡಾ ಪೂಜಾ ಕೈಂಕರ್ಯಗಳಲ್ಲಿ ಬಳಕೆಯಾಗುತ್ತದೆ.
ತ್ಯಾಗ-ಶುದ್ಧತೆ
ತೆಂಗಿನಕಾಯಿಯನ್ನು ಹೆಚ್ಚಾಗಿ ತ್ಯಾಗ, ಶುದ್ಧತೆ, ಅಹಂಕಾರವಿಲ್ಲದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವರಿಗೆ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಅಂದರೆ ತೆಂಗಿನಕಾಯಿಯ ಗಟ್ಟಿಯಾದ ಚಿಪ್ಪು ಅಹಂಕಾರವನ್ನು ಪ್ರತಿನಿಧಿಸಿದರೆ, ಅದನ್ನು ಒಡೆಯುವುದು ಅಹಂ ಅನ್ನು ಅಕ್ಷರಶಃ ಚೂರುಚೂರು ಮಾಡುವುದರ ಸಂಕೇತವಾಗಿದೆ. ಇದರ ಒಳಗಿರುವ ಬಿಳಿ ಭಾಗ ಶುದ್ಧತೆ ಹಾಗೂ ಭಕ್ತಿಯನ್ನು ಪ್ರತಿನಿಧಿಸುತ್ತದೆ.
ಜೀವನವನ್ನು ಪ್ರತಿನಿಧಿಸುತ್ತದೆ
ತೆಂಗಿನಕಾಯಿ ಜೀವನವನ್ನೂ ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತದೆ. ಇದರ ಹೊರಗಿನ ಚಿಪ್ಪು ದೇಹವನ್ನೂ, ಒಳಗಿರುವ ನೀರು ರಕ್ತ ಅಥವಾ ಜೀವ ಶಕ್ತಿ ಹಾಗೂ ಒಳಗಿನ ತಿರುಳು ಆತ್ಮವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಭಕ್ತರು ದೇವರಿಗೆ ತೆಂಗಿನಕಾಯಿ ಅರ್ಪಿಸುವ ಮೂಲಕ ತಮ್ಮ ಜೀವನ ಮತ್ತು ಆತ್ಮವನ್ನೇ ಅರ್ಪಿಸಲು ಅವಕಾಶ ನೀಡುತ್ತದೆ.
ದೈವೀ ಶಕ್ತಿಯ ಆಹ್ವಾನ
ತೆಂಗಿನಕಾಯಿಯನ್ನು ದೇವರುಗಳಿಗೆ ಆಹ್ವಾನವೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿಯನ್ನು ಅರ್ಪಿಸಿದಾಗ, ಅದು ದೈವಿಕ ಶಕ್ತಿಯನ್ನು ಮನೆಗೆ ಆಹ್ವಾನಿಸುತ್ತದೆ, ಕುಟುಂಬಕ್ಕೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.



