ಮತ ಎಣಿಕೆ ಕೇಂದ್ರದಲ್ಲಿ `ಜನ ನಾಯಗನ್’ ಡೌನ್‍ಲೋಡ್ ಮಾಡಿ ವೀಕ್ಷಣೆ : ಓರ್ವನ ಬಂಧನ
ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ಮತ್ತು ನಟ ವಿಜಯ್ ನಟಿಸಿದ, ಇನ್ನೂ ಬಿಡುಗಡೆಯಾಗದ `ಜನ ನಾಯಗನ್’ ಚಿತ್ರವನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿದ್ದಕ್ಕಾಗಿ ಗುತ್ತಿಗೆ ನೌಕರನನ್ನು ಬಂಧಿಸಲಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಇತ್ತೀಚೆಗೆ ನಡೆದಿದ್ದು, ಮತಯಂತ್ರಗಳನ್ನು ಇರಿಸಲಾಗಿರುವ ಅಣ್ಣಾ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದ ಸಿಸಿಟಿವಿ ಕಣ್ಗಾವಲು ಕೊಠಡಿಯಲ್ಲಿ ನಿಯೋಜಿಸಲಾದ ಗುತ್ತಿಗೆ ನೌಕರ ಯುವರಾಜ್ (36) ಬಂಧಿತ ವ್ಯಕ್ತಿ.
ಈತ ಕರ್ತವ್ಯದಲ್ಲಿರುವಾಗ ತನ್ನ ಲ್ಯಾಪ್‍ಟಾಪ್‍ನಲ್ಲಿ `ಜನ ನಾಯಗನ್’ ಚಿತ್ರವನ್ನು ಡೌನ್‍ಲೋಡ್ ಮಾಡಿ ವೀಕ್ಷಿಸಿದ್ದ. ಇದರ ಫೋಟೋಗಳನ್ನು ತೆಗೆದು, ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದ. ಯುವರಾಜ್ ಗುತ್ತಿಗೆ ಆಧಾರದ ಮೇಲೆ ಸಿಸಿಟಿವಿ ತಾಂತ್ರಿಕ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದ ಎಂದು ಗೊತ್ತಾಗಿದೆ.
ಸೈದಾಪೇಟ್, ವಿರುಗಂಬಕ್ಕಂ, ವೇಲಾಚೇರಿ, ಟಿ. ನಗರ ಮತ್ತು ಮೈಲಾಪುರ ಎಂಬ ಐದು ವಿಧಾನಸಭಾ ಕ್ಷೇತ್ರಗಳಿಂದ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (ಇವಿಎಂ) ಏಪ್ರಿಲ್ 23 ರ ರಾತ್ರಿ ಅಣ್ಣಾ ವಿಶ್ವವಿದ್ಯಾಲಯದ ಎಣಿಕೆ ಕೇಂದ್ರಕ್ಕೆ ತಂದು ಇರಿಸಲಾಗಿತ್ತು.
ಯುವರಾಜ್ ಹಂಚಿಕೊಂಡಿದ್ದ ಫೋಟೋ ವೈರಲ್ ಆಗುತ್ತಿದ್ದಂತೆಯೇ ಚೆನ್ನೈ ಕಾಪೆರ್Çರೇಷನ್ ಅಧಿಕಾರಿಯೊಬ್ಬರ ದೂರಿನ ಆಧಾರದ ಮೇಲೆ, ಪೆÇಲೀಸರು ವಿಚಾರಣೆಯನ್ನು ಪ್ರಾರಂಭಿಸಿದ್ದರು. ಸದ್ಯ ತಿರುವರೂರು ಜಿಲ್ಲೆಯ ಮೂಲದ ಯುವರಾಜ್‌ನನ್ನು ಕೊಟ್ಟೂರುಪುರಂ ಪೊಲೀಸರು ಬಂಧಿಸಿದ್ದಾರೆ. ಚುನಾವಣಾ ಭದ್ರತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈತನ ವಿರುದ್ಧ ಮಾಹಿತಿ ತಂತ್ರಜ್ಞಾನದ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



