ಭಾರತದಲ್ಲಿ ಸೊರೆಂಟೊ ಎಸ್‍ಯುವಿ ಬಿಡುಗಡೆಗೆ ಸಜ್ಜಾದ ಕಿಯಾ : ಟೀಸರ್ ಬಿಡುಗಡೆ, ಬುಕಿಂಗ್ ಕೂಡಾ ಆರಂಭ
ಕಿಯಾ ಇಂಡಿಯಾ ತನ್ನ ಬಹುನಿರೀಕ್ಷಿತ ಪ್ರೀಮಿಯಂ ಎಸ್‍ಯುವಿ ಸೊರೆಂಟೊವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಿಯಾ ಭಾರತೀಯ ಮಾರುಕಟ್ಟೆಗೆ ಸೊರೆಂಟೊ ಹೈಬ್ರಿಡ್ ಅನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿದೆ. ಜೊತೆಗೆ ಈ ಹೊಸ ಹೈಬ್ರಿಡ್ ಎಸ್‍ಯುವಿಯ ಬುಕಿಂಗ್ ಕೂಡಾ ಆರಂಭವಾಗಿದೆ.
ಕಿಯಾ ಇಂಡಿಯಾ ಈ ಹೊಸ ಎಸ್‍ಯುವಿಯ ಬಿಡುಗಡೆ ದಿನಾಂಕ ಅಥವಾ ಬೆಲೆಗಳನ್ನು ಘೋಷಿಸಿಲ್ಲವಾದರೂ, ಮೂರು ಸಾಲುಗಳ ಎಸ್‍ಯುವಿ ಭಾರತೀಯ ಶೋರೂಮ್‍ಗಳಿಗೆ ಶೀಘ್ರ ಬರುವ ಸಾಧ್ಯತೆ ಇದೆ. ಈ ಮಧ್ಯಮ ಗಾತ್ರದ ಪ್ರೀಮಿಯಂ ಎಸ್‍ಯುವಿ ಭಾರತಕ್ಕೆ ಹೈಬ್ರಿಡ್ ಎಸ್‍ಯುವಿ ಆಗಿ ಬರಲಿದ್ದು, ಟೊಯೋಟಾ ಫಾರ್ಚೂನರ್, ಸ್ಕೋಡಾ ಕೊಡಿಯಾಕ್, ಫೋಕ್ಸ್ ವ್ಯಾಗನ್ ಟೇರಾನ್, ಜೀಪ್ ಮೆರಿಡಿಯನ್ ನಂತಹ ಕಾರುಗಳಿಗೆ ಪೈಪೋಟಿ ನೀಡಲಿದೆ. ಇದು ದೇಶೀಯ ಮಾರುಕಟ್ಟೆಗೆ ಕಿಯಾ ಬ್ರ್ಯಾಂಡ್‍ನ ಮೊದಲ ಹೈಬ್ರಿಡ್ ಎಸ್‍ಯುವಿ ಆಗಲಿದೆ.
ಮುಂಭಾಗದಲ್ಲಿ, ಟಿ-ಆಕಾರದ ಎಲ್‍ಇಡಿ ಡಿಆರ್‌ಎಲ್ ಗಳೊಂದಿಗೆ ಲಂಬವಾಗಿ ಜೋಡಿಸಲಾದ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ. ಸೊರೆಂಟೊವನ್ನು ಆರು-ಆಸನ ಮತ್ತು ಏಳು-ಆಸನಗಳ ಸಂರಚನೆಗಳಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಕಿಯಾ ಇನ್ನೂ ಭಾರತ-ಸ್ಪೆಕ್ ಒಳಾಂಗಣವನ್ನು ಬಹಿರಂಗಪಡಿಸದಿದ್ದರೂ, ಸೊರೆಂಟೊ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಭಾರತಕ್ಕೆ ಬರುವ ಸೊರೆಂಟೊ ಸ್ವಯಂ-ಚಾಜಿರ್ಂಗ್ ಹೈಬ್ರಿಡ್ ಸಿಸ್ಟಮ್‍ನೊಂದಿಗೆ ಜೋಡಿಸಲಾದ 1.6-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುವ ನಿರೀಕ್ಷೆಯಿದೆ.



