ಋಷಿ ಪತ್ನಿ ಬಾಳೆ ಗಿಡವಾಗಿದ್ದು ಹೇಗೆ? : ಪೂಜನೀಯ ಗಿಡದ ಹಿಂದಿರುವ ಶಾಪದ ಕಥೆ!

ಹಿಂದೂ ಧರ್ಮದಲ್ಲಿ ಬಾಳೆಗಿಡಕ್ಕೆ ಪೂಜನೀಯ ಸ್ಥಾನವಿದೆ. ತೆಂಗಿನಮರದಂತೆಯೇ ಬಾಳೆಗಿಡವನ್ನು ಕೂಡಾ `ಕಲ್ಪವೃಕ್ಷ’ ಎಂದೇ ಪರಿಗಣಿಸಲಾಗುತ್ತದೆ.
ಬಾಳೆಗಿಡ ಪವಿತ್ರ ಗಿಡಗಳಲ್ಲಿ ಒಂದು. ಇದು ಸಮೃದ್ಧಿ, ಫಲವತ್ತತೆ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವನ್ನು ಹಿಂದೂ ಧರ್ಮದ ವಿವಿಧ ಆಚರಣೆಗಳಲ್ಲಿ ಬಳಸಲಾಗುತ್ತದೆ.
ಬಾಳೆಗಿಡದ ಹಿಂದಿದೆ ಶಾಪದ ಕಥೆ
ಹಿಂದೂ ಪುರಾಣದ ಪ್ರಕಾರ ಬಾಳೆಗಿಡದ ಹಿಂದೆ ಒಂದು ಶಾಪದ ಕಥೆಯೂ ಇದೆ. ಒಮ್ಮೆ ಋಷಿ ದೂರ್ವಾಸರು ತನ್ನ ನಿದ್ದೆಗೆ ಅಡ್ಡಿ ಪಡಿಸಿದ ಪತ್ನಿಯ ಮೇಲೆ ಸಿಟ್ಟಾಗಿ `ನೀನು ಬಾಳೆಗಿಡವಾಗು’ ಎಂದು ಶಪಿಸಿದರಂತೆ. ಅದರಂತೆಯೇ ಬಾಳೆಗಿಡವಾದ ಋಷಿ ಪತ್ನಿ, ವಿಶೇಷ ಸ್ಥಾನಮಾನಕ್ಕಾಗಿ ಮನವಿ ಮಾಡಿದರಂತೆ. ಹಾಗಾಗಿ ಪವಿತ್ರ ಸಸ್ಯವೆಂದು ಪರಿಗಣಿಸಬೇಕೆಂಬ ಆಕೆಯ ಬಯಕೆಯನ್ನು ಋಷಿ ದೂರ್ವಾಸರು ಪೂರೈಸಿದಂತೆ. ಅಂದಿನಿಂದ ಬಾಳೆಗಿಡ ಪವಿತ್ರ ಸಸ್ಯವಾಯಿತು ಎನ್ನುವುದು ಬಾಳೆಗಿಡದ ಹಿಂದೆ ಇರುವ ಪೌರಾಣಿಕ ಕಥೆ.
ಸಂಸ್ಕøತದಲ್ಲಿ ಬಾಳೆ ಗಿಡವನ್ನು ಕದಲಿ ಎಂದೂ ಕರೆಯಲಾಗುತ್ತದೆ. ಬಾಳೆಗಿಡ ಭಗವಾನ್ ವಿಷ್ಣು ಹಾಗೂ ದೇವಗುರು ಬೃಹಸ್ಪತಿ ಸೇರಿ ಹಲವಾರು ದೇವತೆಗಳಿಗೆ ಸಂಬಂಧಿಸಿದೆ. ಈ ಗಿಡದ ಎಲೆಗಳು, ಕಾಂಡ, ಹಣ್ಣು, ಹೂವು ಎಲ್ಲವನ್ನೂ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಬುದ್ಧಿವಂತಿಕೆ, ಜ್ಞಾನ, ಸಮೃದ್ಧಿಗೆ ಸಂಬಂಧಿಸಿದ ಗ್ರಹವಾದ ಬೃಹಸ್ಪತಿ (ಗುರು)ಗೂ ಬಾಳೆಗಿಡ ಸಂಬಂಧಿಸಿದ್ದರಿಂದ, ಗುರುವಾರ ಬಾಳೆ ಗಿಡವನ್ನು ಪೂಜಿಸುವುದರಿಂದ ಗುರುವಿನ ಆಶೀರ್ವಾದ ದೊರೆಯುತ್ತದೆ ಎಂಬುದು ನಂಬಿಕೆ.
ವಿವಾಹ, ಪೂಜಾ ಕಾರ್ಯಕ್ರಮಗಳಲ್ಲೂ ಬಾಳೆಗಿಡವನ್ನು ಬಳಸಲಾಗುತ್ತದೆ. ಪ್ರೀತಿ-ಸಮೃದ್ಧಿ ತುಂಬಿದ ಶಾಶ್ವತ ಮದುವೆಯನ್ನು ಸಂಕೇತಿಸಲು ವಿವಾಹದ ಸಮಯದಲ್ಲಿ ಎರಡು ಬಾಳೆಗಿಡಗಳನ್ನು ಇರಿಸಲಾಗುತ್ತದೆ. ಪೂಜೆ, ಹಬ್ಬಗಳ ಸಂದರ್ಭಗಳಲ್ಲಿ ದೇವತೆಗಳ ಪ್ರಾತಿನಿಧ್ಯಗಳನ್ನು ರಚಿಸಲು ಬಾಳೆಗಿಡಗಳನ್ನು ಬಳಸಲಾಗುತ್ತದೆ. ದೇವರಿಗೆ ನೈವೇದ್ಯ ಅರ್ಪಿಸಲು, ಪ್ರಸಾದ ವಿತರಣೆ ವೇಳೆಯೂ ಬಾಳೆ ಎಲೆಗಳ ಬಳಕೆ ಆಗುತ್ತದೆ. ಶುದ್ಧ ಹಣ್ಣು ಎಂದು ಪರಿಗಣಿಸಲಾಗುವ ಬಾಳೆಹಣ್ಣನ್ನು ದೇವರಿಗೆ ಅರ್ಪಿಸಲಾಗುತ್ತದೆ. ಹೀಗೆ ಬಾಳೆ ಗಿಡ ಹಿಂದೂ ಧರ್ಮದ ಪ್ರಮುಖ ಭಾಗವಾಗಿ ಹೋಗಿದೆ.



