Hanuman Jayanti 2026 : ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಮೂಡುಬಿದಿರೆಯ ಹನುಮಾನ್ ದೇವರು
ಏಪ್ರಿಲ್ 2ರಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ. ಹನುಮಂತ ದೇವರ ಜನ್ಮದಿನವನ್ನು ಆಚರಿಸುವುದಕ್ಕಾಗಿ ಈ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ದಿನ ಆಂಜನೇಯ ದೇವರನ್ನು ಪೂಜಿಸುವುದು, ಹನುಮಾನ್ ಮಂತ್ರಗಳನ್ನು ಪಠಿಸುವುದು ಉತ್ತಮ ಎಂಬ ನಂಬಿಕೆ ಇದೆ. ಇಂತಹ ಪವಿತ್ರ ದಿನದ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಹನುಮಾನ್ ದೇವಸ್ಥಾನದ ಬಗೆಗಿನ ವಿವರಗಳು ಇಲ್ಲಿವೆ.

ಮೂಡುಬಿದಿರೆ… ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣ. ಮಂಗಳೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಮೂಡುಬಿದಿರೆ ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕ ಸೇರಿದಂತೆ ಸಾಕಷ್ಟು ಕಾರಣಗಳಿಂದ ತನ್ನದೇ ಆದ ಮಹತ್ವವನ್ನು ಪಡೆದಿರುವ ನೆಲ. ಹೀಗೆ ತನ್ನದೇ ಆದ ಹಿರಿಮೆ ಗರಿಮೆಯನ್ನು ಹೊಂದಿರುವ ಮೂಡುಬಿದಿರೆ ಸಾಕಷ್ಟು ಪವಿತ್ರ ಕ್ಷೇತ್ರಗಳಿಗೂ ನೆಲೆಯಾಗಿದೆ. ಅಂತಹ ಪವಿತ್ರ ಕ್ಷೇತ್ರಗಳಲ್ಲಿ ಮೂಡುಬಿದಿರೆಯ ಹೃದಯ ಭಾಗದಲ್ಲಿರುವ ಹನುಮಾನ್ ದೇವಸ್ಥಾನ ಕೂಡಾ ಒಂದು.

ಮೂಡುಬಿದಿರೆ ಕೇಂದ್ರ ಬಸ್ ನಿಲ್ದಾಣದಿಂದ ಅಣತಿ ದೂರದಲ್ಲಿ, ಪ್ರಮುಖ ರಸ್ತೆಗೆ ತಾಗಿಕೊಂಡಂತೆಯೇ ಇದೆ ಈ ಪ್ರಮುಖ ಕ್ಷೇತ್ರ. ಮೂಡುಬಿದಿರೆಯ ಆಂಜನೇಯ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ದೇವರು ಎಂಬುದು ಆಸ್ತಿಕರ ನಂಬಿಕೆ. ಸೀಯಾಳ ಇಲ್ಲಿನ ಪ್ರಮುಖ ಹರಕೆಗಳಲ್ಲಿ ಒಂದು. ನಿತ್ಯ ದೇವರಿಗೆ ಸೀಯಾಳದ ಅಭಿಷೇಕ ನಡೆಯುತ್ತದೆ. ಎಳ್ಳೆಣ್ಣೆಯನ್ನೂ ದೇವರಿಗೆ ಅರ್ಪಿಸಲಾಗುತ್ತದೆ. ರಂಗಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಇಲ್ಲಿ ದೇವರಿಗೆ ನೆರವೇರುತ್ತದೆ.
ಇತಿಹಾಸ :
ಮೂಡುಬಿದಿರೆಯ ಹನುಮಾನ್ ದೇವಸ್ಥಾನ ಐತಿಹಾಸಿಕವಾಗಿಯೂ ಸಾಕಷ್ಟು ಮಹತ್ವ ಹೊಂದಿದೆ. ಈ ದೇವಾಲಯವು ಸುಮಾರು 9 ಶತಮಾನಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಹನುಮಾನ್ ದೇವರ ಸುಂದರ ಮೂರ್ತಿ ವಿಜಯನಗರ ಆಡಳಿತಗಾರರ ಕೊಡುಗೆ ಎನ್ನುತ್ತದೆ ಇತಿಹಾಸ. ಸದ್ಯ ಇರುವ ಸುಂದರ ದೇಗುಲ 1991ರಲ್ಲಿ ಲೋಕಾರ್ಪಣೆಗೊಂಡಿತ್ತು.
ಪ್ರತಿನಿತ್ಯ ಸಾಕಷ್ಟು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮೂಡುಬಿದಿರೆಯ ಪ್ರವಾಸ ಕೈಗೊಂಡ ಬಹುತೇಕರು ಇಲ್ಲಿಗೊಮ್ಮೆ ಭೇಟಿ ನೀಡುತ್ತಾರೆ. ಹೀಗೆ ಬೇಡಿದ ಇಷ್ಟಾರ್ಥಗಳನ್ನು ಕರುಣಿಸುವ ಹನುಮಂತ ದೇವರು ಎಲ್ಲರನ್ನೂ ಹರಸಲಿ ಎಂಬ ಹಾರೈಕೆ ನಮ್ಮದು…
ಎಲ್ಲರಿಗೂ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು…



