Special Desk

ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಪದ್ಧತಿ : ಪ್ರಾಚೀನ ಭಾರತೀಯ ಅಭ್ಯಾಸದ ಹಿಂದಿನ ಆಳವಾದ ಅರ್ಥ


ನಮ್ಮಲ್ಲಿ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಕ್ರಮ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಇದು ನಮ್ಮ ಜೀವನದ ಪ್ರಧಾನ ಭಾಗವೂ ಹೌದು. ಅನಾದಿಕಾಲದಿಂದಲೂ ಈ ಪದ್ಧತಿಯನ್ನು ನಾವೆಲ್ಲರೂ ಭಾರತೀಯರು ಅನುಸರಿಸಿಕೊಂಡು ಬರುತ್ತಿದ್ದೇವೆ. ಇದು ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಅದ್ಭುತ ಅಭ್ಯಾಸವೂ ಹೌದು.

ಪಾದ ಸ್ಪರ್ಶಿಸಿ ನಮಸ್ಕರಿಸುವ ಕ್ರಿಯೆ ನಮ್ಮಲ್ಲಿ ಸಹಜವಾಗಿಯೇ ನಡೆದು ಹೋಗುತ್ತದೆ. ಅಷ್ಟರಮಟ್ಟಿಗೆ ಈ ಪದ್ಧತಿ ನಮ್ಮೆಲ್ಲರ ಬದುಕಿನ ಕ್ರಮವಾಗಿ ಬೆಸೆದುಕೊಂಡಿದೆ. ಬರೀ ಅಷ್ಟೇ ಅಲ್ಲ ಸಹಸ್ರಾರು ವರ್ಷಗಳಿಂದ ದಾಟಿ ಬಂದಿರುವ ಈ ಸಂಪ್ರದಾಯವು ಶಿಷ್ಟಾಚಾರವನ್ನು ಮೀರಿದ ಮಾನಸಿಕ, ಭಾವನಾತ್ಮಕ ಮತ್ತು ತಾತ್ವಿಕ ಅರ್ಥವನ್ನೂ ಹೊಂದಿದೆ.

ಗೌರವ ಭಾವ
ಇದು ಗೌರವದ ಭಾವ ತೋರುವ ಒಂದು ಮಾರ್ಗವಾಗಿದೆ. ದೈಹಿಕವಾಗಿ ಬಾಗುವ ಮೂಲಕ ಕಿರಿಯರು ಅಹಂ ಭಾವವನ್ನು ಕಳೆದುಕೊಂಡು, ನಮ್ರತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂಬುದನ್ನು ಇದು ಸಂಕೇತಿಸುತ್ತದೆ.

ಆಶೀರ್ವಾದ ಮತ್ತು ಶಕ್ತಿಯ ವಿನಿಮಯದ ಕಲ್ಪನೆ
ಕಿರಿಯರು ತಮ್ಮ ಪಾದಸ್ಪರ್ಶಿಸಿದಾಗ ಹಿರಿಯರು ತಲೆಯ ಮೇಲೆ ಕೈ ಇಟ್ಟು ಆಶೀರ್ವಾದವನ್ನು ರವಾನಿಸುತ್ತಾರೆ ಎನ್ನುವುದು ನಂಬಿಕೆ. ಜೊತೆಗೆ ಈ ಪ್ರಕ್ರಿಯೆ ಸದ್ಭಾವನೆ, ಪ್ರೋತ್ಸಾಹ ಮತ್ತು ಭಾವನಾತ್ಮಕ ಭರವಸೆಯನ್ನು ಒದಗಿಸುತ್ತದೆ. ಮಾನಸಿಕವಾಗಿಯೂ ಬಲ ತರುತ್ತದೆ.

ಕೃತಜ್ಞತೆ
ಪಾದ ಸ್ಪರ್ಶಿಸುವುದು ಕೃತಜ್ಞತೆಯ ಅಭಿವ್ಯಕ್ತಿಯಾಗಿದೆ. ಜೊತೆಗೆ ಹಿರಿಯ ಚರಣ ಸ್ಪರ್ಶ ಭಾರತದ ವಿಶಿಷ್ಟ ಸಾಂಸ್ಕೃತಿಕ ಕೃತಜ್ಞತೆಯ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.

ಸಕಾರಾತ್ಮಕ ಭಾವ
ನಾವು ನಮ್ರತೆ ಮತ್ತು ಗೌರವದಿಂದ ಪಾದಗಳನ್ನುಸ್ಪರ್ಶಿಸಿದಾಗ ನಕಾರಾತ್ಮಕತೆಯಿಂದ ನಮ್ಮನ್ನು ರಕ್ಷಿಸಲು ಸಕಾರಾತ್ಮಕ ಶಕ್ತಿಯ ರೂಪದಲ್ಲಿ ಹರಿಯುವ ಹಿರಿಯರ ಶುಭ ಹಾರೈಕೆಗಳು, ಆಶೀರ್ವಾದಗಳು ಧನಾತ್ಮಕ ಪರಿಣಾಮ ಬೀರುತ್ತವೆ ಎನ್ನುವುದು ನಂಬಿಕೆ

ಜ್ಞಾನಕ್ಕೆ ಗೌರವ
ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು ಅವರ ಜ್ಞಾನವನ್ನು ಗೌರವಿಸುವುದು ಹಾಗೂ ಅವರು ಕಲಿಸಿಕೊಟ್ಟ ಉತ್ತಮ ಪಾಠಗಳನ್ನು ಪಾಲಿಸಿಕೊಂಡು ಮುಂದಿನ ಪೀಳಿಗೆಗೆ ದಾಟಿಸುತ್ತೇವೆ ಎಂಬ ಭರವಸೆಯನ್ನು ನೀಡುವುದೂ ಆಗಿದೆ ಎಂಬ ನಂಬಿಕೆ ನಮ್ಮಲ್ಲಿದೆ.

Show More

Related Articles

Leave a Reply

Your email address will not be published. Required fields are marked *

Back to top button